ತೆರೆದ ಪುಸ್ತಕ ಪರೀಕ್ಷೆ (Open Book Exam)

ತೆರೆದ ಪುಸ್ತಕ ಪರೀಕ್ಷೆಯ ಬಗ್ಗೆ ಲೇಖನಗಳು

“ಪುಸ್ತಕ ಮಸ್ತಕ ಪರೀಕ್ಷೆ : ಶೈಕ್ಷಣಿಕ ಚಲನೆಯ ಸಾಧ್ಯತೆ”

 

 

ಲೇಖಕರು: : ಡಾ.ಎನ್.ಕೆ.ಪದ್ಮನಾಭ.

 

ಪರೀಕ್ಷೆ ಎಂದಾಕ್ಷಣ ವಿದ್ಯಾರ್ಥಿಗಳಲ್ಲಿ ಭಯ, ಆತಂಕ ಆವರಿಸಿಕೊಂಡುಬಿಡುತ್ತದೆ. ಇಂಥ ದಿನದಿಂದ ಪರೀಕ್ಷೆ ಆರಂಭವಾಗುತ್ತದೆ ಎಂಬ ಮಾಹಿತಿ ಕೇಳಿದಾಗ ಅವರೊಳಗೆ ತಳಮಳ ಶುರುವಾಗುತ್ತದೆ. ಓದಿಕೊಂಡಿರುವ ವಿಷಯಗಳನ್ನು ಹೊರತುಪಡಿಸಿ ಕಠಿಣ ಎನ್ನಿಸಿದ ಪಠ್ಯಗಳನ್ನೇ ನೆನಪಿಸಿಕೊಂಡು ಕೊರಗಲಾರಂಭಿಸುತ್ತಾರೆ. ಆ ಕೊರಗಿನ ಭಾವವು ‘ಫೇಲ್ ಆಗಿಬಿಟ್ಟರೆ ಹೇಗೆ?’ ಎಂಬ ಪ್ರಶ್ನೆಯನ್ನು ಕಾಡಿಸಿಕೊಳ್ಳಲು ಪ್ರಚೋದಿಸುತ್ತದೆ. ಅದರ ಪ್ರಚೋದನೆ ಎಷ್ಟು ತೀವ್ರವಾಗಿರುತ್ತದೆ ಎಂದರೆ ಫೇಲ್ ಆದ ನಂತರ ನಡೆಯಬಹುದಾದ ಘಟನಾವಳಿಗಳನ್ನು ಬೆಚ್ಚಿಬೀಳಿಸುವಂತೆ ಕಣ್ಣಮುಂದೆ ತಂದುಬಿಡುತ್ತದೆ. ‘ಅಪ್ಪ ಹೊಡೆಯಬಹುದು, ನಮ್ಮದೇ ಸಂಬಂಧಿಕರು ಹೀಯಾಳಿಸಬಹುದು, ಟೀಚರ್ಸ್ ನನ್ನ ಸಾಮಥ್ರ್ಯದ ಬಗ್ಗೆ ವಿಶ್ವಾಸ ಕಳೆದುಕೊಳ್ಳಬಹುದು, ಇಡೀ ಊರು ಅಥವಾ ಬಡಾವಣೆ ಫೇಲಾದವ ಎಂದು ಮತ್ತೆ ಮತ್ತೆ ಚುಚ್ಚುವಂತೆ ನೋಡಬಹುದು’ ಎಂದುಕೊಳ್ಳುವಂತೆ ಚಿಂತೆಯ ಕೂಪಮಂಡೂಕ ಸ್ಥಿತಿಗೆ ತಳ್ಳುತ್ತದೆ. ಆ ಕ್ಷಣಕ್ಕೆ ಸರಿಯಾದ ಸಲಹೆ, ಮಾರ್ಗದರ್ಶನ ಸಿಕ್ಕರೆ ಸರಿ. ಇಲ್ಲದಿದ್ದರೆ ಅಂಥ ವಿದ್ಯಾರ್ಥಿಗಳ ಶೈಕ್ಷಣಿಕ ಬೆಳವಣಿಗೆಯು ಮಹತ್ವದ ತಿರುವು ಪಡೆಯುವ ಬದಲು ಕವಲು ಹಾದಿ ಹಿಡಿಯುತ್ತದೆ. ಈ ಹಂತದಲ್ಲಿಯೇ ಖಿನ್ನತೆ ನುಸುಳಿಕೊಂಡು ಅವರನ್ನು ನುಜ್ಜುಗುಜ್ಜಾಗಿಸುತ್ತದೆ. ‘ಎಷ್ಟೇ ಅರ್ಥೈಸಿಕೊಳ್ಳಲು ಪ್ರಯತ್ನಿಸಿದರೂ ನನ್ನಿಂದ ಸಾಧ್ಯವಾಗುತ್ತಿಲ್ಲ’ ಎಂಬ ನಿರಾಶಾವಾದ ಜೊತೆಯಾಗಿಬಿಡುತ್ತದೆ. ‘ನಾನಿದ್ದರೂ ಅಷ್ಟೇ, ಸತ್ತರೂ ಅಷ್ಟೇ’ ಎಂಬ ಭಾವನೆ ಚಿಗುರೊಡೆದು ಅರಳುವ ಜೀವಗಳನ್ನು ಬೇಟೆಯಾಡಿಬಿಡುತ್ತದೆ. ಶಿಕ್ಷಣ ಎಂಬ ಅತ್ಯದ್ಭುತ ಚಲನೆಯ ಪರಿಕಲ್ಪನೆಯೇ ವಿದ್ಯಾರ್ಥಿಗಳನ್ನು ಹೀಗೆ ಬೇಟೆಯಾಡುವ ಮೂಲವಾಗಿಬಿಟ್ಟರೆ ಹೇಗೆ? ಇದಕ್ಕೆ ಯಾರು ಹೊಣೆ?

ಸೂಕ್ಷ್ಮವಾಗಿ ಯೋಚಿಸಿದರೆ ಉತ್ತರಗಳೂ ಹೊಳೆಯುತ್ತವೆ. ಆ ಉತ್ತರಗಳೊಳಗೆ ಇಡೀ ಶೈಕ್ಷಣಿಕ ವ್ಯವಸ್ಥೆಯ ಲೋಪಗಳೂ ಕಾಣಿಸಿಕೊಳ್ಳುತ್ತವೆ. ಅವುಗಳೊಂದಿಗೆ ತಳುಕುಹಾಕಿಕೊಂಡ ಈ ದೇಶದ ಸಾಮಾಜಿಕ ವ್ಯವಸ್ಥೆಯ ಊನಗಳೂ ಗೋಚರಿಸುತ್ತವೆ. ಈ ದೇಶದಲ್ಲಿ ಶಾಲೆಗಳಿವೆ. ಕಾಲೇಜುಗಳಿವೆ. ವಿಶ್ವವಿದ್ಯಾನಿಲಯಗಳಿವೆ. ಶಿಕ್ಷಕರಿದ್ದಾರೆ. ಶಿಕ್ಷಣ ವ್ಯವಸ್ಥೆ ನಿರ್ವಹಣೆಗೆ ಪ್ರತ್ಯೇಕ ಇಲಾಖೆ ಅಸ್ತಿತ್ವದಲ್ಲಿದೆ. ವಿವಿಧ ಹಂತಗಳ ಮೇಲುಸ್ತುವಾರಿಗೆಂದೇ ಸಚಿವ ಖಾತೆ ಇದೆ. ಶಿಕ್ಷಣ ತಜ್ಞರಿದ್ದಾರೆ. ಇಷ್ಟೆಲ್ಲಾ ಇದ್ದರೂ ಶಿಕ್ಷಣವು ಜ್ಞಾನಧಾರೆಯೊಂದಿಗಿನ ಬೌದ್ಧಿಕ ಚಲನೆಗೆ ಪ್ರೇರಣೆ ನೀಡುವ ಬದಲು ಕೇವಲ ಒತ್ತಡ, ಹತಾಶೆ, ಸಂದಿಗ್ಧತೆ, ತೊಳಲಾಟಗಳನ್ನು ಸೃಷ್ಟಿಸುವ ಮೂಲವಾಗಿದೆ. ಇದಕ್ಕೆ ನೀತಿ ನಿರೂಪಣೆ ವ್ಯಾಪ್ತಿಯಲ್ಲಿ ಶಿಕ್ಷಣಕ್ಕೆ ಪ್ರತ್ಯೇಕ ಆದ್ಯತೆ ಇಲ್ಲದಿರುವುದೇ ಕಾರಣ. ಇದೇ ಶಿಕ್ಷಣವನ್ನೇ ಹಾದುಹೋದವರು ಶಿಕ್ಷಕರಾಗುತ್ತಾರೆ. ಅಧಿಕಾರಿಗಳಾಗುತ್ತಾರೆ. ಶಾಸಕಾಂಗವನ್ನು ಪ್ರತಿನಿಧಿಸುತ್ತಾರೆ. ಇವರ ನಡುವೆಯೇ ರೂಪುಗೊಳ್ಳಬೇಕಾದ ನೀತಿಗೆ ಹೊಸ ಆಯಾಮ ದೊರಕುವುದು ಭಿನ್ನವಾಗಿ ಆಲೋಚಿಸಿದಾಗ ಮಾತ್ರ. ಹಾಗೆ ಯೋಚಿಸುವುದಕ್ಕೆ ರಾಜಕಾರಣ ಬಿಡುವುದಿಲ್ಲ. ಸಚಿವ ಹುದ್ದೆಯಲ್ಲಿರುವವರು ಮತ್ತು ಉನ್ನತ ಅಧಿಕಾರಿವರ್ಗದ ನಡುವಿನ ಚರ್ಚೆಯ ಫಲಿತವಾಗಿ ಶಿಕ್ಷಣ ನೀತಿಗಳು ರೂಪುಗೊಳ್ಳುತ್ತವೆ. ಎಲ್ಲರಿಗೂ ಸದ್ಯದ ಯಥಾಸ್ಥಿತಿಗೆ ಹೊಂದಿಕೊಳ್ಳುವ ಅಪೇಕ್ಷೆ. ಹಾಗಾಗಿಯೇ ಕಲಿಯುವ ಮನಸ್ಸಿನ ವಿವಿಧ ವಯೋಮಾನದ ವಿದ್ಯಾರ್ಥಿಗಳ ಪ್ರಜ್ಞಾಶೀಲ ಬೆಳವಣಿಗೆಗೆ ಬೇಕಾದ ಪೂರಕ ವಾತಾವರಣ ಸೃಷ್ಟಿಸುವ ಹೊಸದಾದ ಶೈಕ್ಷಣಿಕ ಹೆಜ್ಜೆಗಳು ಮೂಡುವುದೇ ಇಲ್ಲ. ಈ ಕಾರಣಕ್ಕಾಗಿಯೇ ಜನಸಮೂಹವು ಹೊಸ ಯೋಚನೆಗಳನ್ನು ಒಪ್ಪಿಕೊಳ್ಳುವುದಿಲ್ಲ. ಅಷ್ಟೇ ಅಲ್ಲ, ತನ್ನೊಳಗಿನ ಸಂಕುಚಿತ ದೃಷ್ಟಿಕೋನದ ಮಟ್ಟಕ್ಕೆ ಹೊಸ ಆಲೋಚನೆಗಳನ್ನು ಇಳಿಸಿಕೊಂಡು ತೀರ್ಪು ನೀಡಲಾರಂಭಿಸುತ್ತದೆ. ತೆರೆದ ಪುಸ್ತಕ ಪರೀಕ್ಷೆಯ ಹೊಸ ಚಿಂತನೆಯು ಇಂಥದ್ದೇ ಮನೋಧರ್ಮದ ಪರಿಮಿತಿಯೊಳಗೆ ನಲುಗುತ್ತಿದೆ.

ತೆರೆದ ಪುಸ್ತಕ ಪರೀಕ್ಷೆಯು ಕಾಪಿ ಹೊಡೆಯುವುದಕ್ಕೆ ಸಹಕಾರಿ ಎಂಬ ತಪ್ಪುಕಲ್ಪನೆಯನ್ನು ಬಿತ್ತುತ್ತಿರುವುದು ಇಂಥದ್ದೇ ಸಂಕುಚಿತ ಮನೋಧರ್ಮ. ಈ ಕರ್ಮಕ್ಕೆ ಶಿಕ್ಷಕರೇಕೆ? ಪರೀಕ್ಷೆಗಳೇಕೆ? ಎಂಬ ವಿತಂಡವಾದಿ ಪ್ರಶ್ನೆಗಳನ್ನೇ ಈ ಸಂಕುಚಿತತೆ ತೂರಿಬಿಡುತ್ತಿದೆ. ನೋಡಿಕೊಂಡು ಬರೆಯುವ ಅವಕಾಶ ನೀಡುವ ಬದಲು ಪರೀಕ್ಷೆಗಳನ್ನೇ ರದ್ದುಮಾಡಿದರೆ ಸರಿಯಾದೀತು ಎಂಬ ವಿಚಿತ್ರವಾದವನ್ನು ಮುಂದಿಡುತ್ತಿದೆ. ಇಡೀ ವರ್ಷ ಶಿಕ್ಷಕರು ಪಾಠ ಮಾಡುವ ಅನಿವಾರ್ಯತೆ ಇಲ್ಲವಾದ್ದರಿಂದ ಶಾಲೆಗಳನ್ನು ಮುಚ್ಚಿಸಿದರೆ ಒಳ್ಳೆಯದು ಎಂಬ ನಿಲುವನ್ನು ವ್ಯಕ್ತಪಡಿಸುತ್ತದೆ. ಶಿಕ್ಷಕ ಹುದ್ದೆಗಳನ್ನೂ ರದ್ದುಮಾಡಿದರೆ ಶಿಕ್ಷಣ ಇಲಾಖೆಯ ಮೂಲಕ ರಾಜ್ಯ ಬೊಕ್ಕಸಕ್ಕೆ ಉಳಿತಾಯವಾದರೂ ಆಗುತ್ತದೆ ಎಂಬ ಬಾಲಿಶ ಹೇಳಿಕೆಯನ್ನು ರೂಪಿಸುತ್ತದೆ. ಇವೆಲ್ಲವೂ ತಪ್ಪುಕಲ್ಪನೆಗಳು ಎಂಬುದನ್ನು ತಜ್ಞವಲಯ ಹಿಂದೆಂದಿಗಿಂತಲೂ ಗಟ್ಟಿಯಾಗಿ ಹೇಳಬೇಕಿದೆ. ಶಿಕ್ಷಣದ ಸಾಂಪ್ರದಾಯಿಕ ಗುಣಲಕ್ಷಣವನ್ನು ಮುರಿದು ಇದಕ್ಕೆ ಹೊಸ ಬಗೆಯ ಕಾಯಕಲ್ಪ ನೀಡುವ ಅಗತ್ಯವನ್ನು ಪ್ರಬಲವಾಗಿ ಪ್ರತಿಪಾದಿಸಬೇಕಿದೆ. ವಿದ್ಯಾರ್ಥಿಗಳನ್ನು ಬೌದ್ಧಿಕ ಸಂಪನ್ಮೂಲವಾಗಿಸುವ ಕ್ರಿಯಾಶೀಲ ಜ್ಞಾನಧಾರೆಯ ಚಲನಶೀಲ ನೆಲೆಯನ್ನಾಗಿ ಶಿಕ್ಷಣರಂಗವನ್ನು ಪುನರ್‍ರೂಪಿಸಬೇಕಾದ ಅವಶ್ಯಕತೆ ಇದೆ. ಉದ್ಯೋಗಾವಕಾಶಗಳನ್ನು ಪಡೆದುಕೊಳ್ಳುವುದಕ್ಕಷ್ಟೇ ಅಲ್ಲದೇ ಈ ದೇಶದ ಸ್ಥಿತಿ-ಗತಿಗಳ ಸುಧಾರಣೆಯ ಹೊಸ ಬಗೆಯ ಆಲೋಚನಾಕ್ರಮಗಳನ್ನು ಹೊಳೆಸಿಕೊಳ್ಳುವ ಶಕ್ತಿಯನ್ನು ಪ್ರತಿಯೊಬ್ಬರಲ್ಲೂ ತುಂಬುವ ವೈಚಾರಿಕ ಪರಿಕರವಾಗಿ ಶಿಕ್ಷಣ ಮಾರ್ಪಾಡಾಗಬೇಕಿದೆ. ಹಾಗಾಗುವುದಕ್ಕೆ ತೆರೆದ ಪುಸ್ತಕ ಪರೀಕ್ಷೆ ಮೊದಲ ಮೆಟ್ಟಿಲು ಎಂಬುದನ್ನು ಎಲ್ಲರೂ ಎಷ್ಟು ಬೇಗ ಅರ್ಥೈಸಿಕೊಳ್ಳುತ್ತಾರೋ ಅಷ್ಟೇ ವೇಗವಾಗಿ ಶೈಕ್ಷಣಿಕ ಬದಲಾವಣೆಯ ಪ್ರಕ್ರಿಯೆ ಆರಂಭವಾಗುತ್ತದೆ.

ನಾಲ್ಕು ಗೋಡೆಗಳ ಮಧ್ಯೆ ನಡೆಯುವ ತರಗತಿಗಳು ಕೇವಲ ಯಾಂತ್ರಿಕತೆಯನ್ನು ಸಂಕೇತಿಸುವುದಿಲ್ಲ. ಇಡೀ ವರ್ಷದಾದ್ಯಂತ ಪ್ರತಿ ದಿನವೂ ವಿವಿಧ ತರಗತಿಗಳಲ್ಲಿ ವ್ಯಕ್ತವಾದ ವಿಚಾರಗಳು ಮತ್ತು ಪುಸ್ತಕದಲ್ಲಿರುವ ವಿಶ್ಲೇಷಣೆಯನ್ನು ವಿದ್ಯಾರ್ಥಿಗಳು ಹೇಗೆ ಗ್ರಹಿಸುತ್ತಾರೆ ಎನ್ನುವುದರ ಮೇಲೆಯೇ ಅವರ ಸಾಮಥ್ರ್ಯ ಒರೆಗಲ್ಲಿಗೆ ಹಚ್ಚಲ್ಪಡುತ್ತದೆ. ತರಗತಿಗಳು ಯಾಂತ್ರಿಕವಾದರೆ ವಿದ್ಯಾರ್ಥಿಗಳೊಳಗೆ ಯೋಚಿಸುವ ಸಾಮಥ್ರ್ಯ ಬತ್ತಿಬಿಡುತ್ತದೆ. ಪರೀಕ್ಷೆಗಳೂ ಯಾಂತ್ರಿಕವಾದರೆ ಅವರೊಳಗೆ ಜ್ಞಾನ ಪ್ರವಹಿಸುವ ಬದಲು ಜಡತೆಯೇ ಆವರಿಸಿಕೊಂಡುಬಿಡುತ್ತದೆ. ತರಗತಿಯಲ್ಲಿ ಕೇಳಿದ್ದು, ಗ್ರಹಿಸಿದ್ದು, ಪುಸ್ತಕಗಳಲ್ಲಿ ಓದಿಕೊಂಡಿದ್ದು, ತದನಂತರ ಪ್ರಶ್ನೆಗಳು ಹುಟ್ಟಿಕೊಂಡಿದ್ದು, ಆ ಪ್ರಶ್ನೆಗಳಿಗೆ ಅನುಗುಣವಾಗಿ ಯೋಚಿಸಿದ್ದು, ಆ ಯೋಚನೆಗೆ ತಕ್ಕಂತೆ ಹೊಸ ಧಾಟಿಯಲ್ಲಿ ಚಿಂತನೆ ರೂಪುಗೊಂಡಿದ್ದು – ಇವೆಲ್ಲ ಹಂತಗಳೂ ವಿದ್ಯಾರ್ಥಿಗಳ ಶೈಕ್ಷಣಿಕ ಬದುಕಿನಲ್ಲಿ ಪ್ರಮುಖ ಪಾತ್ರವಹಿಸುತ್ತವೆ. ಈ ಹಂತಗಳನ್ನು ಯಶಸ್ವಿಯಾಗಿ ನಿರ್ವಹಿಸುವ ರೀತಿಯಲ್ಲಿಯೇ ತರಗತಿಗಳಿರಬೇಕು. ಅವುಗಳಿಗೆ ಬೇಕಾದ ಬೋಧನಾಕ್ರಮ ರೂಪುಗೊಳ್ಳಬೇಕು. ಅಂಥ ಬೋಧನಾಕ್ರಮವು ಪರೀಕ್ಷೆಯ ಕುರಿತಾದ ಭಯವನ್ನು ಓಡಿಸುತ್ತದೆ. ಆತಂಕವನ್ನು ಇಲ್ಲವಾಗಿಸುತ್ತದೆ. ಉತ್ತರಗಳನ್ನು ಬರೆದು ನಿರ್ದಿಷ್ಟ ವಿಷಯದ ಕುರಿತು ಸ್ವಯಂ ಸ್ಪಷ್ಟತೆ ಕಂಡುಕೊಳ್ಳುವ ವಿನೂತನ ಮಾದರಿಗಳನ್ನು ತೋರ್ಪಡಿಸುತ್ತದೆ. ಅಂಥ ಮಾದರಿಗಳನ್ನು ಕಂಡುಕೊಳ್ಳುವಂತೆಯೇ ಪ್ರಶ್ನೆಪತ್ರಿಕೆಗಳು ರಚಿತವಾಗಬೇಕಾಗುತ್ತದೆ. ಅವುಗಳು ಪರೀಕ್ಷೆಯ ಬಗ್ಗೆ ಪ್ರೀತಿ ಹೆಚ್ಚಿಸುತ್ತವೆ. ಸ್ವಯಂಸಾಮಥ್ರ್ಯವನ್ನು ವಿಸ್ತರಿಸಿಕೊಳ್ಳುವ ವೇದಿಕೆಯನ್ನು ಒದಗಿಸಿಕೊಡುತ್ತವೆ. ತೆರೆದ ಪುಸ್ತಕ ಪರೀಕ್ಷೆಯ ಪರಿಕಲ್ಪನೆಯನ್ನು ಈ ನೆಲೆಯಲ್ಲಿಯೇ ಅರ್ಥೈಸಿಕೊಳ್ಳಬೇಕಾದ ಅಗತ್ಯವಿದೆ.

ಬಾಲ್ಯದಲ್ಲಿ ಮಕ್ಕಳೊಳಗೆ ನಡೆಯುತ್ತಿದ್ದ ಸಂಭಾಷಣೆಯ ವೈಖರಿಯಲ್ಲಿ ಶಿಕ್ಷಣ ವ್ಯವಸ್ಥೆಯ ನಕಾರಾತ್ಮಕತೆಯ ವ್ಯಂಗ್ಯವನ್ನು ಗುರುತಿಸಬಹುದೇನೋ ಎಂದೆನ್ನಿಸುತ್ತದೆ. ಪರೀಕ್ಷೆ ಶುರುವಾಗುತ್ತವೆ ಎಂದ ತಕ್ಷಣ ಮಕ್ಕಳಲ್ಲಿ ಮನೆಮಾಡಿಕೊಳ್ಳುವ ಭಯ ಮಾತುಗಳ ಮೂಲಕ ವ್ಯಕ್ತವಾಗುತ್ತದೆ. ಆ ಮಾತುಗಳು ಶಾಲೆ ಮತ್ತು ಪರೀಕ್ಷೆಗಳ ಕುರಿತು ಅವರ ನಂಬಿಕೆಗಳೇನೇನು ಎಂಬುದನ್ನೂ ಸ್ಪಷ್ಟಪಡಿಸುತ್ತಿರುತ್ತವೆ. ನಾವೆಲ್ಲ ಸಣ್ಣವರಿದ್ದಾಗ ಬಹಳ ಚಾಲ್ತಿಯಲ್ಲಿದ್ದ ಬರಹದ ಸಾಲುಗಳು ನೆನಪಾಗುತ್ತಿವೆ. ‘ಪೆನ್ನೆಂಬ ಆಯುಧ ಹಿಡಿದು, ಮಸಿ ಎಂಬ ರಕ್ತ ಚೆಲ್ಲಿ, ಪರೀಕ್ಷೆ ಎಂಬ ಯುದ್ಧದಲ್ಲಿ ಗೆದ್ದು ಬಾ ಗೆಳೆಯ’ ಎಂಬ ಹಾರೈಕೆಯ ಸಾಲುಗಳು ಇಡೀ ಶಿಕ್ಷಣ ವ್ಯವಸ್ಥೆಯನ್ನು ವಿಡಂಬಿಸುವಂತೆಯೇ ಇದ್ದವು ಎಂದೆನ್ನಿಸುತ್ತದೆ. ಯುದ್ಧ ಎಂದರೆ ಮಾರಣಹೋಮವನ್ನು ಸಂಕೇತಿಸುವ ನಕಾರಾತ್ಮಕ ಪದ. ಅದಕ್ಕೂ ಪರೀಕ್ಷೆಗೂ ಏನು ಸಂಬಂಧ? ಎಂಬುದನ್ನು ಪ್ರಾಥಮಿಕ ಶಾಲಾಹಂತದ ಮಕ್ಕಳು ಯೋಚಿಸುವುದಿಲ್ಲವಾದರೂ, ಆ ಹಂತದಲ್ಲಿ ಆ ಸಾಲುಗಳು ಅವರನ್ನು ಬಹುವಾಗಿ ಪ್ರಭಾವಿಸುತ್ತವೆ ಎಂಬುದನ್ನು ಅಲ್ಲಗಳೆಯಲಾಗದು. ಯುದ್ಧವು ವಿನಾಶದ ಅರ್ಥವನ್ನು ಧ್ವನಿಸುತ್ತದೆ. ಪರೀಕ್ಷೆಯು ವಿದ್ಯಾರ್ಥಿಗಳ ಬೌದ್ಧಿಕತೆಯನ್ನು ಕಟ್ಟುವ ಅರ್ಥ ಹೊಳೆಸುತ್ತದೆ. ಈ ಸಾಲುಗಳಲ್ಲಿನ ಪೆನ್ನು ಮತ್ತು ಮಸಿ ಜ್ಞಾನವನ್ನು ಸ್ಪಷ್ಟಪಡಿಸಿಕೊಳ್ಳುವ ಅರ್ಥವತ್ತಾದ ಉತ್ತರ ಬರಹ ಬರೆಯುವುದಕ್ಕೇ ಬಳಕೆಯಾಗಬೇಕಾಗುತ್ತದೆ. ಪೆನ್ನನ್ನು ಆಯುಧವಾಗಿಸಿಕೊಳ್ಳುವುದಕ್ಕಿಂತ ಸ್ವಯಂವಿವೇಚನೆಯ ಬೌದ್ಧಿಕತೆಯನ್ನು ಕಂಡುಕೊಳ್ಳುವ ಬೆಳಕಿನ ಪರಿಕರವಾಗಿಸಿಕೊಳ್ಳುವುದರಲ್ಲಿಯೇ ವಿದ್ಯಾರ್ಥಿಗಳ ಹೆಗ್ಗಳಿಕೆ ಇರುತ್ತದೆ. ಪೆನ್ನಿನೊಳಗಿನ ಮಸಿಯು ರಕ್ತ ಚೆಲ್ಲುವ ಅಥವಾ ರಕ್ತ ಚೆಲ್ಲುವುದಕ್ಕೆ ಪ್ರಚೋದನೆ ನೀಡುವಂಥ ನಕಾರಾತ್ಮಕ ವಸ್ತು ಆಗಬೇಕಿಲ್ಲ. ಅದರ ಬದಲು ವಿದ್ಯಾರ್ಥಿಗಳೊಳಗೆ ಬೌದ್ಧಿಕ ಹಸಿವು ಮೂಡಿಸಿ ಅದಕ್ಕೆ ತಕ್ಕಂತೆ ತಾವು ಜ್ಞಾನಸಂಪನ್ಮೂಲವಾಗುವ ಹುಮ್ಮಸ್ಸು ಮೂಡಿಸುವ ಜೈವಿಕ ಜಲವಾಗಬೇಕು. ಪೆನ್ನು ಆಯುಧವಾದರೆ, ಮಸಿ ರಕ್ತವನ್ನು ಸಂಕೇತಿಸಿದರೆ, ಪರೀಕ್ಷೆಯು ಉಳಿದವರನ್ನು ಸೋಲಿಸುವುದರ ಕಡೆಗೇ ಗಮನಹರಿಸುವಂಥ ಅಮಾನುಷ ಯುದ್ಧವಾಗುತ್ತದೆ. ಉಳಿದವರನ್ನೂ ಗೆಲ್ಲಿಸಿ, ನಮ್ಮನ್ನು ನಾವು ಗೆದ್ದುಕೊಂಡು ಜ್ಞಾನದ ಹಸಿವು ನೀಗಿಸಿಕೊಳ್ಳುತ್ತಾ ನೈತಿಕ ಹಾದಿ ಕಂಡುಕೊಳ್ಳುವ ಪ್ರಬಲ ಪರಿಕರಗಳಾಗಿ ಅವೆರಡೂ ಗ್ರಹಿಸಲ್ಪಡಬೇಕು. ಹಾಗಾದಾಗ ಮಾತ್ರ ಪರೀಕ್ಷೆಯು ವ್ಯಕ್ತಿಗತ ಬೌದ್ಧಿಕ ಸಾಮಥ್ರ್ಯವನ್ನು ಸಾಬೀತುಪಡಿಸುವ ವೇದಿಕೆಯಾಗಿ ಮಾರ್ಪಡುತ್ತದೆ. ತೆರೆದ ಪುಸ್ತಕ ಪರೀಕ್ಷೆಯ ಪರಿಕಲ್ಪನೆಯು ಈ ನಿಟ್ಟಿನಲ್ಲಿ ಮೊದಲ ಹೆಜ್ಜೆ ಎಂದೇ ಪರಿಭಾವಿಸಿಕೊಳ್ಳಬೇಕು.

ತೆರೆದ ಪುಸ್ತಕ ಪರೀಕ್ಷೆಯ ಬಗ್ಗೆ ಆಲೋಚಿಸುವುದಕ್ಕೆ ಮೊದಲು ಶಾಲಾ-ಕಾಲೇಜುಗಳಲ್ಲಿನ ಬೋಧನಾಕ್ರಮಗಳ ಕುರಿತು ಚರ್ಚೆಯಾಗಬೇಕು. ಪ್ರಾಥಮಿಕ, ಪ್ರೌಢ, ಪದವಿ ಪೂರ್ವ, ಪದವಿ, ಸ್ನಾತಕೋತ್ತರ – ಹೀಗೆ ವಿವಿಧ ಹಂತಗಳಲ್ಲಿ ಹರಿಯುವ ಶಿಕ್ಷಣವು ಪ್ರತಿಯೊಬ್ಬರೊಳಗೂ ಸಮಗ್ರ ಸಾಮಥ್ರ್ಯ ರೂಢಿಸುವುದರ ಕಡೆಗೇ ಪ್ರಯಾಣಿಸಬೇಕು. ಹಾಗಾಗುವುದಕ್ಕೆ ಶಿಕ್ಷಕರ ಬೋಧನಾ ಶೈಲಿ ಮರುರೂಪುಗೊಳ್ಳಬೇಕು. ಶಿಕ್ಷಕನೊಬ್ಬನ ಬೋಧನಾ ಶೈಲಿ ಹೀಗೆಯೇ ಇರಬೇಕು ಎಂಬ ಕಟ್ಟಪ್ಪಣೆಗಿಂತ ತರಗತಿಯಲ್ಲಿನ ವಿದ್ಯಾರ್ಥಿಗಳ ಗ್ರಹಿಕೆಯ ಸಾಮಥ್ರ್ಯಕ್ಕೆ ಅನುಗುಣವಾಗಿ ಆ ಕ್ಷಣಕ್ಕೆ ಏರ್ಪಡಿಸಿಕೊಳ್ಳುವ ಬೋಧನಾಕ್ರಮ ಮುಖ್ಯ ಎಂಬ ಮುಕ್ತ ಅವಕಾಶಕ್ಕೆ ಆದ್ಯತೆ ಇರಬೇಕು. ಇದರಿಂದಾಗಿ ತರಗತಿಯಲ್ಲಿನ ವಿದ್ಯಾರ್ಥಿಗಳ ಸಂಖ್ಯೆ, ಗ್ರಹಿಕೆಯ ಸಾಮಥ್ರ್ಯ, ಅರ್ಥೈಸಿಕೊಳ್ಳುವುದಕ್ಕೆ ಸಂಬಂಧಿಸಿದಂತೆ ಇರುವ ಸಮಸ್ಯೆಗಳು, ಶಾಲೆ-ಕಾಲೇಜು ಇರುವ ಸ್ಥಳದ ಪ್ರಾದೇಶಿಕ ಸಾಮಾಜಿಕ ಆಯಾಮ – ಇವೆಲ್ಲವುಗಳ ಆಧಾರದಲ್ಲಿ ಶಿಕ್ಷಕನೊಬ್ಬ ತನ್ನ ಬೋಧನಾಶೈಲಿಯನ್ನು ವಿನ್ಯಾಸಗೊಳಿಸಿಕೊಂಡು ಶಿಕ್ಷಣದ ಸಮಗ್ರತೆಯ ಉದ್ದೇಶವನ್ನು ಈಡೇರಿಸುವುದಕ್ಕೆ ಸಾಧ್ಯವಾಗುತ್ತದೆ. ಇಲ್ಲದಿದ್ದರೆ ತರಗತಿಯಲ್ಲಿನ ಎಲ್ಲ ವಿದ್ಯಾರ್ಥಿಗಳೂ ಶೈಕ್ಷಣಿಕವಾಗಿ ಸಶಕ್ತರಾಗುವ ಅವಕಾಶದ ಬಾಗಿಲು ಮುಚ್ಚುತ್ತದೆ. ಮುಕ್ತವಾಗಿ ಆಲೋಚಿಸುವ ಅವರೊಳಗಿನ ಶಕ್ತಿ ಇಲ್ಲವಾಗಿಬಿಡುತ್ತದೆ. ಮುಕ್ತ ಚಿಂತನೆ ಮತ್ತು ತಿಳಿದುಕೊಳ್ಳುವ ಹಂಬಲಗಳನ್ನು ಬಿತ್ತುವ ಹಾಗೆಯೇ ಬೋಧನಾ ಶೈಲಿ ರೂಪಿಸಿಕೊಂಡಾಗ ವಿದ್ಯಾರ್ಥಿಗಳು ಪರೀಕ್ಷೆಯನ್ನು ಅತ್ಯಂತ ಸಹಜ ಪ್ರಕ್ರಿಯೆಯನ್ನಾಗಿ ಸ್ವೀಕರಿಸುತ್ತಾರೆ. ಅದರ ಕುರಿತಾದ ಭಯ ದೂರವಾಗುತ್ತದೆ. ಆಗ ತೆರೆದ ಪುಸ್ತಕ ಪರೀಕ್ಷೆಯಂಥ ಅವಕಾಶಗಳು ಅವರೊಳಗೆ ಭಿನ್ನವಾಗಿ ಓದಿಕೊಳ್ಳುವ, ಗ್ರಹಿಸಿಕೊಳ್ಳುವ ಮತ್ತು ಹೊಸ ಚಿಂತನೆಯನ್ನು ಹೊಳೆಸಿಕೊಳ್ಳುವ ಉತ್ಸಾಹವನ್ನು ಹೆಚ್ಚಿಸುತ್ತವೆ. ವಿದ್ಯಾರ್ಥಿಗಳ ಸಾಮಾಜಿಕತೆ, ತರಗತಿಗಳ ಭೌತಿಕ-ಬೌದ್ಧಿಕ ಸಶಕ್ತತೆ ಮತ್ತು ಶಾಲಾ-ಕಾಲೇಜುಗಳಲ್ಲಿನ ಮುಕ್ತ ಶೈಕ್ಷಣಿಕ ವಾತಾವರಣವು ತೆರೆದ ಪುಸ್ತಕ ಪರೀಕ್ಷೆಯ ಪ್ರಯೋಗಗಳಿಗೆ ಭದ್ರ ಅಡಿಪಾಯ ಹಾಕಿಕೊಡುತ್ತವೆ.

ಈ ಸೂಕ್ಷ್ಮತೆಯನ್ನೇ ಅರಿಯದಿದ್ದರೆ ಬರೀ ಮೇಲ್ಮಟ್ಟದ ಗ್ರಹಿಕೆಗಳನ್ನೇ ನೆಚ್ಚಿಕೊಂಡು ಶೈಕ್ಷಣಿಕ ನೀತಿಗಳು ರೂಪುಗೊಳ್ಳುತ್ತವೆ. ಅವುಗಳು ವಾಸ್ತವವನ್ನು ದೃಷ್ಟಿಯಲ್ಲಿರಿಸಿಕೊಂಡಿರುವುದಿಲ್ಲ. ಆಯಾ ಹಂತಗಳಲ್ಲಿ ಓದುತ್ತಿರುವ ವಿದ್ಯಾರ್ಥಿಗಳ ಸ್ವರೂಪವನ್ನು ದೃಷ್ಟಿಯಲ್ಲಿರಿಸಿಕೊಂಡು ಶೈಕ್ಷಣಿಕ ಸುಧಾರಣೆಯ ಪ್ರಕ್ರಿಯೆ ನಡೆಯಬೇಕು. ಶಿವಮೊಗ್ಗದಲ್ಲಿ ಖ್ಯಾತ ಕವಿ ಕೆ.ಎಸ್.ನಿಸಾರ್ ಅಹಮದ್ ಅವರ ಅಧ್ಯಕ್ಷತೆಯಲ್ಲಿ ನಡೆದಿದ್ದ ಅಖಿಲ ಭಾರತ ಸಾಹಿತ್ಯ ಸಮ್ಮೇಳನದ ಮಕ್ಕಳ ಗೋಷ್ಠಿಯಲ್ಲಿ ಬಾಲಕನೊಬ್ಬ ಎತ್ತಿದ್ದ ಪ್ರಶ್ನೆ ಈಗಲೂ ಪ್ರಸ್ತುತ ಎಂದೆನ್ನಿಸುತ್ತದೆ. ಆಗ ಪ್ರಾಥಮಿಕ ಹಂತದಿಂದಲೇ ಇಂಗ್ಲಿಷ್ ಕಲಿಕೆಯು ಶುರುವಾಗಬೇಕು ಎಂಬ ಚರ್ಚೆ ನಡೆಯುತ್ತಿತ್ತು. ಸರ್ಕಾರ ಇದನ್ನು ಪರಿಶೀಲಿಸುವುದಾಗಿ ಮುಂದಡಿಯಿಟ್ಟಿತ್ತು. ಆಗ ಉಪಮುಖ್ಯಮಂತ್ರಿಯಾಗಿದ್ದವರು ಬಿ.ಎಸ್.ಯಡಿಯೂರಪ್ಪ ಅವರು. ಆ ಬಾಲಕ ಮಾತನಾಡುತ್ತಿದ್ದ ಸಂದರ್ಭದಲ್ಲಿಯೇ ಯಡಿಯೂರಪ್ಪ ಅವರು ಗೋಷ್ಠಿ ನಡೆಯುತ್ತಿದ್ದ ವೇದಿಕೆಯ ಮುಂಭಾಗದ ಆಸನದಲ್ಲಿ ಆಸೀನರಾದರು. ಅವನ ಮಾತನ್ನು ಆಲಿಸುತ್ತಲೇ ಬಂದು ಕುಳಿತ ಅವರು ಆಶ್ಚರ್ಯಚಕಿತರಾದರು. “ನಮಗೂ ಮನಸ್ಸಿದೆ. ನಮ್ಮನ್ನೂ ಅರ್ಥಮಾಡಿಕೊಳ್ಳಿ. ಕನ್ನಡ ನಮ್ಮಮ್ಮ. ಇಂಗ್ಲಿಷ್ ನಮ್ಮಮ್ಮ ಅಲ್ಲ. ನಮ್ಮಮ್ಮನ ಭಾಷೆಯಲ್ಲಿಯೇ ನಮ್ಮನ್ನು ಕಲಿಯುವುದಕ್ಕೆ ಬಿಡಿ. ನಿಮಗೇನು ಗೊತ್ತಾಗುತ್ತದೆ. ನೀವು ರಾಜಕಾರಣಿಗಳು. ನಿಮ್ಮಿಷ್ಟದಂತೆಯೇ ಎಲ್ಲವೂ ಆಗಬೇಕು. ಆದರೆ, ನಮ್ಮಿಷ್ಟವನ್ನೂ ನೀವು ಗಮನಿಸಬೇಕಲ್ಲವೇ?” ಎಂಬ ಪ್ರಶ್ನೆ ಅವನಿಂದ ವ್ಯಕ್ತವಾಯಿತು. ಅವನ ಕನ್ನಡ ಭಾಷಿಕ ಸೊಗಡು ಮತ್ತು ವೈಚಾರಿಕ ಸ್ಪಷ್ಟತೆಗೆ ಮನಸೋತ ಯಡಿಯೂರಪ್ಪ ಅವರು ಅವನ ಮಾತು ಮುಗಿದ ತಕ್ಷಣವೇ ವೇದಿಕೆಗೆ ತೆರಳಿ ಮೆಚ್ಚುಗೆ ವ್ಯಕ್ತಪಡಿಸಿ ಬೆನ್ನು ತಟ್ಟಿದ್ದರು. ಮಕ್ಕಳ ಮನಸ್ಸನ್ನು ಅರ್ಥೈಸಿಕೊಳ್ಳದೇ ಪಠ್ಯ, ಬೋಧನಾಕ್ರಮ ಮತ್ತು ಪರೀಕ್ಷೆಗಳನ್ನು ವಿನ್ಯಾಸಗೊಳಿಸುವ ನಡೆಗಳಿಂದ ಪ್ರಯೋಜನವಿಲ್ಲ ಎಂಬುದನ್ನು ಈ ಪ್ರಸಂಗವು ಸ್ಪಷ್ಟಪಡಿಸುತ್ತದೆ.

ತೆರೆದ ಪುಸ್ತಕ ಪರೀಕ್ಷೆಯು ಬರೆಯಲು ಕುಳಿತ ಅಷ್ಟೂ ವಿದ್ಯಾರ್ಥಿಗಳ ಗ್ರಹಿಕೆಯ ಶಕ್ತಿಯನ್ನು ಅಳೆಯುವಲ್ಲಿ ಪ್ರಮುಖ ಪಾತ್ರವಹಿಸುತ್ತದೆ. ನಿರ್ದಿಷ್ಟ ವಿಷಯದ ತರಗತಿಗಳಲ್ಲಿ ವ್ಯಕ್ತವಾದ ವಿಚಾರಗಳು ಮತ್ತು ಅದೇ ವಿಷಯಕ್ಕೆ ಸಂಬಂಧಿಸಿದಂತೆ ಪುಸ್ತಕದಲ್ಲಿ ದೊರಕುವ ಸಂಪನ್ಮೂಲಗಳನ್ನು ಒಬ್ಬ ವಿದ್ಯಾರ್ಥಿ ಗ್ರಹಿಸುವುದಕ್ಕೂ, ಮತ್ತೊಬ್ಬ ವಿದ್ಯಾರ್ಥಿ ಗ್ರಹಿಸುವುದಕ್ಕೂ ವ್ಯತ್ಯಾಸಗಳು ಇದ್ದೇ ಇರುತ್ತವೆ. ಅವರಿಬ್ಬರೊಳಗೂ ಗ್ರಹಿಕೆಯ ಸಮಗ್ರತೆ ಸಾಧ್ಯವಾಗುವಂತೆಯೇ ಪಠ್ಯ, ಬೋಧನೆ ಇರಬೇಕು. ಹಾಗಿದ್ದಾಗ ಪುಸ್ತಕಗಳ ಅಧ್ಯಯನಕ್ಕೆ ಪ್ರೇರಣೆ ನೀಡಿದಂತಾಗುತ್ತದೆ. ಆ ಓದು ವಿವಿಧ ವಿದ್ಯಾರ್ಥಿಗಳ ಜ್ಞಾನದ ಆವರಣವನ್ನು ವಿಸ್ತರಿಸುತ್ತಾ ಹೋಗುತ್ತದೆ. ಪರೀಕ್ಷೆಗಳಲ್ಲಿ ಬರುವ ಪ್ರಶ್ನೆಯು ನಿರೀಕ್ಷಿಸುವ ತಾರ್ಕಿಕ ಉತ್ತರವನ್ನು ಅತ್ಯಂತ ದೃಢವಿಶ್ವಾಸದಲ್ಲಿ ಬರೆಯುವುದಕ್ಕೆ ನೆರವಾಗುತ್ತದೆ. ಒಂದು ಪ್ರಶ್ನೆ, ಹಲವು ಬಗೆಯ ಉತ್ತರಗಳು –  ಇದೇ ಎಲ್ಲಾ ವಿಷಯಗಳ ಪ್ರಶ್ನೆ ಪತ್ರಿಕೆಗಳ ವಿನ್ಯಾಸದ ಹಿಂದಿನ ಧ್ಯೇಯವಾಕ್ಯವಾಗಬೇಕು. ಆ ಪ್ರಶ್ನೆಪತ್ರಿಕೆಯನ್ನು ಬಿಡಿಸುವಾಗ ವಿದ್ಯಾರ್ಥಿಗಳ ಕೈಯಲ್ಲಿಯೇ ಪುಸ್ತಕಗಳಿದ್ದರೂ ಅವುಗಳಲ್ಲಿರುವ ವಾಕ್ಯಗಳನ್ನೇ ಯಥಾವತ್ತಾಗಿ ಬರೆಯುವಂತಿಲ್ಲ. ಆ ವಾಕ್ಯಗಳಲ್ಲಿನ ಅಂಶಗಳನ್ನು ಭಿನ್ನವಾಗಿ ಗ್ರಹಿಸಿ ಆ ಕ್ಷಣಕ್ಕೆ ಎದುರಾಗಿರುವ ಪ್ರಶ್ನೆಯೊಂದು ಏನನ್ನು ನಿರೀಕ್ಷಿಸುತ್ತಿದೆ ಎಂಬುದನ್ನು ಯೋಚಿಸಿ ಬರೆಯುವುದಕ್ಕಣಿಯಾದರೆ ಭಿನ್ನ ಬಗೆಯ ಉತ್ತರವೊಂದು ರೂಪುಗೊಳ್ಳುತ್ತದೆ. ಉಳಿದವರಿಗಿಂತ ವಿಭಿನ್ನವಾದ ಉತ್ತರವನ್ನು ಕೊಟ್ಟ ಸಮಾಧಾನ ವಿದ್ಯಾರ್ಥಿಗಳಲ್ಲಿ ನೆಲೆಗೊಳ್ಳುತ್ತದೆ. ಹೀಗೆ ಪರೀಕ್ಷೆಗೆ ಕುಳಿತ ತರಗತಿಯ ಅಷ್ಟೂ ವಿದ್ಯಾರ್ಥಿಗಳು ಬೇರೆ ಬೇರೆ ಬಗೆಯ ಕರಾರುವಾಕ್ಕಾದ ತಾರ್ಕಿಕ ಸೃಜನಶೀಲತೆಯನ್ನು ಉತ್ತರ ಪ್ರತಿಗಳ (ಆನ್ಸರ್ ಶೀಟ್ಸ್) ಮೂಲಕ ದೃಢಪಡಿಸಬಹುದು. ಇದನ್ನು ದೃಷ್ಟಿಯಲ್ಲಿರಿಸಿಕೊಂಡು ಸಮಗ್ರ ಶಿಕ್ಷಣ ನೀತಿಯೊಂದು ರೂಪುಗೊಳ್ಳಬೇಕು. ಇದರ ಸಾಧ್ಯಾಸಾಧ್ಯತೆಗಳನ್ನು ದೃಷ್ಟಿಯಲ್ಲಿರಿಸಿಕೊಂಡೇ ಚರ್ಚೆಗಳು ನಡೆಯಬೇಕು.

ಮುಚ್ಚಿದ ವ್ಯವಸ್ಥೆಯ ‘ತೆರೆದ ಪುಸ್ತಕ’

 

 

(“ ತೆರೆದ ಪುಸ್ತಕ ” ಪರೀಕ್ಷೆಯ ಬಗ್ಗೆ 28 ನವೆಂಬರ್ 2018ರ “ ಪ್ರಜಾವಾಣಿ ” ಪತ್ರಿಕೆಯ ಶಿಕ್ಷಣ ಪುರವಣೆಯಲ್ಲಿ ಪ್ರಕಟವಾಗಿರುವ ಲೇಖನ.)

 

ಕೃಪೆ : ಪ್ರಜಾವಾಣಿ

ಲೇಖಕರು:  ಸಿಬಂತಿ ಪದ್ಮನಾಭ . ಕೆ. ವಿ.

ತೆರೆದ ಪುಸ್ತಕ ಪರೀಕ್ಷೆಗಳ ಬಗ್ಗೆ ಶಿಕ್ಷಣ ಸಚಿವರ ಪ್ರಸ್ತಾಪದಿಂದ ಹುಟ್ಟಿಕೊಂಡ ಚರ್ಚೆಗಳು ಅಲ್ಲಲ್ಲೇ ಮೌನವಾಗುತ್ತಿದ್ದ ಹಾಗೆಯೇ ಅಖಿಲ ಭಾರತ ತಾಂತ್ರಿಕ ಶಿಕ್ಷಣ ಪರಿಷತ್ತು (ಎಐಸಿಟಿಇ) ಮುಂದಿನ ವರ್ಷದಿಂದ ಎಲ್ಲ ಎಂಜಿನಿಯರಿಂಗ್ ಕಾಲೇಜುಗಳಲ್ಲೂ ತೆರೆದ ಪುಸ್ತಕ ಪರೀಕ್ಷಾ ಪದ್ಧತಿಯನ್ನು ಜಾರಿಗೆ ತರುವುದಾಗಿ ಪ್ರಕಟಿಸಿದೆ. ಯಾವುದೇ ವ್ಯವಸ್ಥೆಯಲ್ಲಿ ಹೊಸ ಬದಲಾವಣೆಯೊಂದು ಪ್ರಸ್ತಾಪವಾದಾಗ ಅದರ ಬಗ್ಗೆ ಪರ–ವಿರೋಧ ಚರ್ಚೆಗಳು ಬರುವುದು ಸಾಮಾನ್ಯ. ಆದರೆ ಅವುಗಳ ಸಾರ್ಥಕತೆಯಿರುವುದು ಅವೇನಾದರೂ ತಾರ್ಕಿಕ ಅಂತ್ಯ ಕಾಣುತ್ತವೆಯೇ ಎಂಬುದರಲ್ಲಿ.

ತೆರೆದ ಪುಸ್ತಕ ಪರೀಕ್ಷೆಯ ಅಗತ್ಯವನ್ನು ಪ್ರತಿಪಾದಿಸುವವರು ಗುರುತಿಸುವ ಪ್ರಧಾನ ಅಂಶಗಳು ಎರಡು: ಮೊದಲನೆಯದು, ಅದು ಮಕ್ಕಳಲ್ಲಿನ ಪರೀಕ್ಷಾ ಭಯವನ್ನು ಹೋಗಲಾಡಿಸುತ್ತದೆ; ಎರಡನೆಯದು, ಅದು ಮಕ್ಕಳಲ್ಲಿ ವಿಶ್ಲೇಷಣಾ ಕೌಶಲವನ್ನು ಬೆಳೆಸುತ್ತದೆ ಮತ್ತು ಇವೆರಡೂ ಅವರ ವ್ಯಕ್ತಿತ್ವ ವಿಕಸನಕ್ಕೆ ಪೂರಕವಾಗಿವೆ. ಈ ಅಭಿಪ್ರಾಯದಲ್ಲಿ ಹುರುಳೇನೋ ಇದೆ. ಆದರೆ ಇದರಿಂದಲೇ ನಮ್ಮ ಒಟ್ಟಾರೆ ಶಿಕ್ಷಣ ವ್ಯವಸ್ಥೆಯ ದೋಷಗಳು ಪರಿಹಾರವಾಗುತ್ತವೆಯೇ ಎಂಬುದು ನಮ್ಮ ಮುಂದಿನ ಪ್ರಶ್ನೆ. ವಿಷಯದ ಎರಡೂ ಮಗ್ಗುಲನ್ನು ಪರಿಶೀಲಿಸೋಣ.

ನಮ್ಮಲ್ಲಿ ಚಾಲ್ತಿಯಲ್ಲಿರುವ ಪರೀಕ್ಷಾ ಪದ್ಧತಿ ವಿದ್ಯಾರ್ಥಿ ಗಳಿಸಿದ ಜ್ಞಾನ ಮತ್ತು ಕೌಶಲಗಳ ಮೌಲ್ಯಮಾಪನಕ್ಕಿಂತಲೂ ಆತನ ಜ್ಞಾಪಕಶಕ್ತಿಯ ಪರೀಕ್ಷೆ ಆಗಿರುವುದೇ ಹೆಚ್ಚು. ಇಡೀ ಸೆಮಿಸ್ಟರ್ ಓದಿದ್ದರ ಸಾರಸರ್ವಸ್ವವನ್ನು ಕಂಠಪಾಠ ಮಾಡಿ ನೆನಪುಳಿದದ್ದನ್ನು ಮೂರು ಗಂಟೆಗಳಲ್ಲಿ ಕಕ್ಕುವ ಈ ಪದ್ಧತಿ ಯಾವ ರೀತಿಯಲ್ಲೂ ವಿದ್ಯಾರ್ಥಿಯ ವ್ಯಕ್ತಿತ್ವವನ್ನು ಬೆಳೆಸೀತು ಎಂದು ನಿರೀಕ್ಷಿಸುವುದು ಕಷ್ಟ. ಬದುಕನ್ನು ಎದುರಿಸುವ ವಿಚಾರ ಹಾಗಿರಲಿ, ಪರೀಕ್ಷೆಯಲ್ಲಿ ನೂರಕ್ಕೆ ನೂರು ಅಂಕಗಳಿಸಿದ ವಿದ್ಯಾರ್ಥಿಯೊಬ್ಬ ತನ್ನ ದಿನನಿತ್ಯದ ಜವಾಬ್ದಾರಿಗಳನ್ನಾದರೂ ಸಮರ್ಥನಾಗಿ ನಿರ್ವಹಿಸಬಲ್ಲನೇ? ಅದಕ್ಕೆ ಬೇಕಾದ ಸಾಮಾನ್ಯ ವಿವೇಕ, ವ್ಯವಹಾರ ಕುಶಲತೆಯನ್ನು ಅವನ ಶಿಕ್ಷಣ ಪದ್ಧತಿ ಬೆಳೆಸಿದೆಯೇ? ಇಲ್ಲವಾದರೆ ಶಿಕ್ಷಣ ಅವನಿಗೇನು ಕೊಟ್ಟಿದೆ? ನೂರಕ್ಕೆ ನೂರು ಅಂಕ ಕೊಟ್ಟ ಪರೀಕ್ಷೆ ಅವನ ಯಾವ ಜ್ಞಾನವನ್ನು ಅಳೆದಿದೆ?

ತೆರೆದ ಪುಸ್ತಕದ ಪರೀಕ್ಷೆ ಇಂತಹ ಸಮಸ್ಯೆಗೇನಾದರೂ ಪರಿಹಾರ ತೋರಿಸೀತೇ ಎಂದು ಅನಿಸುವುದು ಇಂತಹ ಪ್ರಶ್ನೆಗಳ ನಡುವೆ. ಪಠ್ಯಪುಸ್ತಕದಲ್ಲಿರುವ ಜ್ಞಾನವನ್ನು ವಿದ್ಯಾರ್ಥಿಗಳ ತಲೆಗೆ ವರ್ಗಾಯಿಸುವುದೇ ಬೋಧನೆ ಎಂಬುದು ರೂಢಿಗತ ಚಿಂತನೆಯಾದರೆ ವಿದ್ಯಾರ್ಥಿಗಳು ಕಲಿಯುವುದನ್ನು ಕಲಿಸುವುದೇ ಬೊಧನೆ ಎಂಬುದು ಹೊಸ ಬಗೆಯ ಚಿಂತನೆ. ಜಗತ್ತು ಆಧುನಿಕವಾಗುತ್ತಿದ್ದಂತೆಯೇ, ದಿನನಿತ್ಯದ ಬದುಕು ಹಾಗೂ ವೃತ್ತಿಜೀವನದಲ್ಲಿ ಹೊಸ ಸವಾಲುಗಳು ಎದುರಾಗುತ್ತಿದ್ದಂತೆಯೇ ಅದಕ್ಕೆ ಸೂಕ್ತವಾದ ಮಾನಸಿಕತೆಯನ್ನು ಸಿದ್ಧಗೊಳಿಸುವುದು ಶಿಕ್ಷಕರ ಹಾಗೂ ಶಿಕ್ಷಣದ ಜವಾಬ್ದಾರಿ.

ಶಿಕ್ಷಣತಜ್ಞ ಬೆಂಜಮಿನ್ ಬ್ಲೂಮ್ ಬೋಧನೆಯ ಆರು ಉದ್ದೇಶಗಳನ್ನು ಗುರುತಿಸುತ್ತಾನೆ: ಜ್ಞಾನ, ಗ್ರಹಿಕೆ, ಆನ್ವಯಿಕತೆ, ವಿಶ್ಲೇಷಣೆ, ಸಂಶ್ಲೇಷಣೆ ಹಾಗೂ ಮೌಲ್ಯಮಾಪನ. ಮೊದಲನೇ ಹಂತ ವಿಷಯಗಳನ್ನು ತಿಳಿದುಕೊಳ್ಳುವುದು ಮತ್ತು ಅಗತ್ಯವಿರುವಲ್ಲಿ ನೆನಪಿಸಿಕೊಳ್ಳುವುದಾದರೆ, ಎರಡನೆಯ ಹಂತ ಪಡೆದ ಮಾಹಿತಿಗಳನ್ನು ಅರ್ಥೈಸಿಕೊಳ್ಳುವುದಾಗಿದೆ. ಮೂರನೇ ಹಂತ ನಿರ್ದಿಷ್ಟ ಸಮಸ್ಯೆಗೆ ಜ್ಞಾನವನ್ನು ಅನ್ವಯಿಸಿಕೊಳ್ಳುವುದಕ್ಕೆ ಸಂಬಂಧಿಸಿದ್ದಾದರೆ, ನಾಲ್ಕನೇ ಹಂತ ವಿವಿಧ ಪರಿಕಲ್ಪನೆಗಳನ್ನು ಪರಿಶೀಲಿಸಿ ಅವುಗಳ ನಡುವಿನ ವ್ಯತ್ಯಾಸವನ್ನು ಗುರುತಿಸುವುದಾಗಿದೆ. ಐದನೇ ಹಂತದಲ್ಲಿ ಪರಿಕಲ್ಪನೆ ಅಥವಾ ವಿಚಾರಗಳ ಕುರಿತು ನಿರ್ಣಯಗಳನ್ನು ಕೈಗೊಳ್ಳಲು ಸಾಧ್ಯವಾದರೆ, ಕೊನೆಯ ಹಂತದಲ್ಲಿ ವಿದ್ಯಾರ್ಥಿಯೇ ಹೊಸ ಚಿಂತನೆಗಳನ್ನು ಸೃಜಿಸಲು ಸಮರ್ಥನಾಗಬೇಕಾಗುತ್ತದೆ. ಸಾಂಪ್ರದಾಯಿಕ ಶಿಕ್ಷಣ ಪದ್ಧತಿ ಮೊದಲನೇ ಹಂತಲ್ಲಿ ಆರಂಭವಾಗಿ ಅದರಲ್ಲೇ ಅಂತ್ಯ ಕಾಣುತ್ತಿರುವುದೇ ವಿದ್ಯಾರ್ಥಿಗಳು ನಂಬಿಕೊಂಡಿರುವ ಪುಸ್ತಕದ ಬದನೆಕಾಯಿಯ ಹಿಂದಿರುವ ರಹಸ್ಯ. ತೆರೆದ ಪುಸ್ತಕ ಪರೀಕ್ಷಾ ಪದ್ಧತಿಯಲ್ಲಿ ಇದಕ್ಕೇನಾದರೂ ಪರಿಹಾರ ದೊರೆತೀತೇ ಎಂಬುದು ಸದ್ಯದ ಪ್ರಶ್ನೆ.

ತೆರೆದ ಪುಸ್ತಕ ಪರೀಕ್ಷೆಯೆಂದರೆ ಪರೀಕ್ಷಾ ಕೊಠಡಿಯೊಳಗೆ ಸಿದ್ಧ ಉತ್ತರಗಳ ಗೈಡುಗಳನ್ನು ಒಯ್ದು ಉತ್ತರಗಳನ್ನು ನಕಲು ಮಾಡುವ ವಿಧಾನವೇನೂ ಅಲ್ಲ. ಪಠ್ಯಪುಸ್ತಕ, ಪರಾಮರ್ಶನ ಗ್ರಂಥ ಮತ್ತಿತರ ಪೂರ್ವನಿರ್ಧರಿತ ಸಾಮಗ್ರಿಗಳನ್ನು ಮಾತ್ರ ಒಳಗೆ ಒಯ್ಯಲು ಅವಕಾಶ ನೀಡಲಾಗುತ್ತದೆ. ಪ್ರಶ್ನಪತ್ರಿಕೆಗಳೂ ರೂಢಿಯಲ್ಲಿರುವಂತೆ ‘ಎಂದರೇನು’, ‘ವ್ಯಾಖ್ಯಾನಿಸಿ’, ‘ಪಟ್ಟಿಮಾಡಿ’, ‘ವಿವರಿಸಿ’ ಎಂಬಿತ್ಯಾದಿ ಪ್ರಶ್ನೆಗಳಿಗೆ ಸೀಮಿತವಾಗಿರುವುದಿಲ್ಲ. ಅಲ್ಲಿ ವಿಮರ್ಶೆ-ವಿಶ್ಲೇಷಣೆಗಳಿಗೆ ಆದ್ಯತೆ. ಆಗ ಮೌಲ್ಯಮಾಪನದ ವಿಧಾನವೂ ಬದಲಾಗುತ್ತದೆ. ಪದವಿ, ಸ್ನಾತಕೋತ್ತರ ಪದವಿ, ಕಾನೂನು, ವೈದ್ಯಕೀಯ, ಎಂಜಿನಿಯರಿಂಗ್‌ನಂತಹ ವೃತ್ತಿಪರ ಕೋರ್ಸ್‌ಗಳಲ್ಲಿ ಈ ಪದ್ಧತಿ ಸಾಧ್ಯವಾದೀತೇನೋ? ಆದರೆ ಪ್ರಾಥಮಿಕ ಅಥವಾ ಮಾಧ್ಯಮಿಕ ಶಾಲಾ ಹಂತದಲ್ಲಿ ಇದನ್ನು ಅನುಷ್ಠಾನಕ್ಕೆ ತರುವ ಮುನ್ನ ಸಾಕಷ್ಟು ಯೋಚಿಸಬೇಕಾಗುತ್ತದೆ.

ತೆರೆದ ಪುಸ್ತಕ ಪರೀಕ್ಷೆಗಳ ಪದ್ಧತಿ ಅಮೆರಿಕ, ಆಸ್ಟ್ರೇಲಿಯಾ, ಫಿನ್‌ಲ್ಯಾಂಡ್, ಕೆನಡಾ, ಜರ್ಮನಿ, ಸ್ವಿಟ್ಜರ್ಲೆಂಡ್‌ನಂತಹ ದೇಶಗಳಲ್ಲಿ ಯಶಸ್ವಿಯಾಗಿ ಅನುಷ್ಠಾನಗೊಂಡಿದೆ. ಅಲ್ಲಿ ತೆರೆದ ಪುಸ್ತಕವೇನು, ಪ್ರಶ್ನಪತ್ರಿಕೆಯನ್ನು ಮನೆಗೇ ಒಯ್ದು ಪರೀಕ್ಷೆ ಬರೆಯುವ ಪದ್ಧತಿಯೂ ಯಶಸ್ವಿಯಾಗಿದೆ – ಎಂಬ ಕಾರಣಕ್ಕೆ ನಮ್ಮಲ್ಲೂ ಅದು ಯಶಸ್ವಿಯಾದೀತೇ? ಇದು ಕೇವಲ ಪರೀಕ್ಷೆಯ ಪ್ರಶ್ನೆ ಮಾತ್ರವಾಗಿದ್ದರೆ ಉತ್ತರಿಸುವುದು ಸುಲಭವಿತ್ತು. ಆದರೆ ನಮ್ಮ ಸಮಸ್ಯೆ ಪರೀಕ್ಷೆಗೆ ಮಾತ್ರ ಸಂಬಂಧಿಸಿದ್ದಲ್ಲ; ನಮ್ಮ ಶಿಕ್ಷಣ ವ್ಯವಸ್ಥೆ ಆಮೂಲಾಗ್ರ ಪರಿವರ್ತನೆಯನ್ನು ಬಯಸುತ್ತಿದೆ.

ಇಂದಿಗೂ ಬಹುತೇಕ ಶಾಲೆಗಳು ಮೂಲಭೂತ ಸೌಕರ್ಯಗಳ ಕೊರತೆ, ಪೀಠೋಪಕರಣ, ಬೋಧನೋಪಕರಣಗಳ ಕೊರತೆಯಿಂದ ಬಳಲುತ್ತಿವೆ. ಶಿಕ್ಷಕರನ್ನು ಪಾಠಮಾಡುವುದೊಂದನ್ನುಳಿದು ಇನ್ನೆಲ್ಲ ಕೆಲಸಗಳಿಗೂ ಬಳಸಿಕೊಳ್ಳಲಾಗುತ್ತಿದೆ. ಯತಾರ್ಥವಾಗಿ ಅವರಿಗೆ ಮಕ್ಕಳೊಂದಿಗೆ ಬೆರೆಯುವುದಕ್ಕೆ, ಅವರು ಇಷ್ಟಪಡುವಂತೆ ಪಾಠಮಾಡುವುದಕ್ಕೆ ಸಮಯವೇ ಇಲ್ಲ. ಅದರ ಮೇಲೆ ಹೇಗಾದರೂ ಮಾಡಿ ನೂರಕ್ಕೆ ನೂರು ಫಲಿತಾಂಶ ಪಡೆಯುವ ಒತ್ತಡ. ಇದರ ನಡುವೆ ತೆರೆದ ಪುಸ್ತಕದ ಪರೀಕ್ಷೆಗೆ ಮಕ್ಕಳನ್ನು ಸಿದ್ಧಪಡಿಸುವ ಹೊಸ ಬಗೆಯ ಬೋಧನಾ ವಿಧಾನಕ್ಕೆ ಅವರು ಒಗ್ಗಿಕೊಳ್ಳುವುದೆಂತು? ಅದಕ್ಕೆ ತಕ್ಕುದಾದ ಪ್ರಶ್ನಪತ್ರಿಕೆಗಳನ್ನು ಸಿದ್ಧಪಡಿಸುವುದಕ್ಕೆ ಎಷ್ಟು ಮಂದಿ ಶಿಕ್ಷಕರು ಸ್ವತಃ ಸಮರ್ಥರಿದ್ದಾರೆ?

ಇನ್ನೊಂದೆಡೆ, ಇಡೀ ಸಮಾಜ ಅಂಕ ಗಳಿಕೆಯ ಓಟದಲ್ಲಿ ನಿರತವಾಗಿದೆ. ಎಸ್‌ಎಸ್‌ಎಲ್‌ಸಿ, ಪಿಯುಸಿಯಲ್ಲಿ ಪಡೆವ ಅಂಕಗಳೇ ಮಕ್ಕಳ ಒಟ್ಟಾರೆ ಭವಿಷ್ಯದ ಅಡಿಗಲ್ಲುಗಳೆಂಬಂತೆ ಬಿಂಬಿಸಲಾಗುತ್ತಿದೆ. ನಿದ್ದೆ ಮಾಡುವ ನಾಲ್ಕೈದು ಗಂಟೆಗಳ ಹೊರತಾಗಿ ಉಳಿದೆಲ್ಲ ಸಮಯದಲ್ಲೂ ಬೆಳಗು, ಸಂಜೆ, ಮಳೆ, ಚಳಿಗಳೆಂಬ ವ್ಯತ್ಯಾಸ ಗೊತ್ತಾಗದಂತೆ ವಿದ್ಯಾರ್ಥಿಗಳನ್ನು ಟ್ಯೂಶನ್ ಗಿರಣಿಗಳಲ್ಲಿ ರುಬ್ಬಲಾಗುತ್ತಿದೆ. ನೂರಕ್ಕೆ ನೂರು ಅಂಕ ಗಳಿಸುವ ಹೊರತಾಗಿ ಅವರ ವಿದ್ಯಾರ್ಥಿಜೀವನಕ್ಕೆ ಇನ್ನೇನೂ ಗುರಿಗಳೇ ಇಲ್ಲ. ಇಂಥ ಮಕ್ಕಳಿಗೆ ಪುಸ್ತಕ ತೆರೆದರೂ ಅಷ್ಟೆ, ಮುಚ್ಚಿದರೂ ಅಷ್ಟೆ. ಪರೀಕ್ಷಾ ಭಯದಿಂದ ಎಷ್ಟು ವಿದ್ಯಾರ್ಥಿಗಳು ಈವರೆಗೆ ಆತ್ಮಹತ್ಯೆ ಮಾಡಿಕೊಂಡಿದ್ದಾರೋ ಗೊತ್ತಿಲ್ಲ, ಆದರೆ ಫಲಿತಾಂಶದ ಮತ್ತು ಅದರಿಂದ ಬರುವ ಪ್ರಕ್ರಿಯೆಯ ಭಯದಿಂದಾಗಿ ಈವರೆಗೆ ಪ್ರಾಣಕಳಕೊಂಡಿರುವ ಅಮಾಯಕ ಜೀವಗಳು ಸಾವಿರಾರು.

ಈ ಮೂಲಭೂತ ವ್ಯವಸ್ಥೆಯನ್ನು ಸರಿಪಡಿಸದೆ ಏಕಾಏಕಿ ತೆರೆದ ಪುಸ್ತಕ ಪರೀಕ್ಷೆಗಳನ್ನು ಜಾರಿಗೆ ತಂದು ಎಲ್ಲವನ್ನೂ ಬದಲಾಯಿಸಿಬಿಡುತ್ತೇವೆ ಎಂಬ ಯೋಚನೆ ಮೂರ್ಖತನದ್ದು. ಒಳಗೆ ಮುಳ್ಳನ್ನು ಉಳಿಸಿಕೊಂಡು ಹೊರಗಿನಿಂತ ಎಷ್ಟು ಮುಲಾಮು ಹಚ್ಚಿದರೇನು ಪ್ರಯೋಜನ?

“ ತೆರೆದ ಪುಸ್ತಕ ” ಪರೀಕ್ಷೆಯ ಬಗ್ಗೆ 28 ನವೆಂಬರ್ 2018ರ “ ಪ್ರಜಾವಾಣಿ ” ಪತ್ರಿಕೆಯ ಶಿಕ್ಷಣ ಪುರವಣೆಯಲ್ಲಿ ಪ್ರಕಟವಾಗಿರುವ ಲೇಖನ  ವೀಕ್ಷಿಸಲು ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ.

 

 

https://www.prajavani.net/educationcareer/education/open-book-system-590423.html

PHOTO-2018-11-22-08-22-02

ಪ್ರಜಾವಾಣಿಯಲ್ಲಿ ಪ್ರಕಟಗೊಂಡ ಸಂತೋಷ್ ನಾಯಕ್ರವರ ಲೇಖನ

prajavani article pics

ಪ್ರಜಾವಾಣಿಯಲ್ಲಿ ಪ್ರಕಟಗೊಂಡ ಸಿಬಂತಿ ಪದ್ಮನಾಭರ ಲೇಖನ